
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ತಡರಾತ್ರಿ ಅನಿಲ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ. ಮಳೆಯ ನಡುವೆ ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದೆ.
ಸ್ಥಳೀಯರು ಶಾಂತಾರಾಮ ಹುಲಸ್ವಾರ ಅವರ ನೆರವಿನಿಂದ ತಕ್ಷಣ ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಯಾವುದೇ ಅನಿಲ ಸೋರಿಕೆಯಾಗದ ಹಿನ್ನೆಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ನಾಲ್ಕೈದು ಕ್ರೇನ್ಗಳ ನೆರವಿನಿಂದ ಟ್ಯಾಂಕರ್ ತೆರವುಗೊಳಿಸಲಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ತಡರಾತ್ರಿ 3.30ರವರೆಗೆ ಕಾರ್ಯಾಚರಣೆ ನಡೆಸಿದರು. ಸ್ಥಳೀಯರ ಸಮಯಪ್ರಜ್ಞೆ ಹಾಗೂ ಇಲಾಖೆಗಳ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಂಕೋಲಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ವೇಳೆ, ಅಂಬೇಡ್ಕರ್ ಸರ್ಕಲ್ ಬಳಿ ಐಆರ್ಬಿಯ ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಹಾಗೂ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.









