ತವರು ಮನೆಯತ್ತ ಗೃಹಿಣಿಯರ ಹೆಜ್ಜೆ; ಮಾರುಕಟ್ಟೆಯಲ್ಲಿ ರಾಖಿ ಖರೀದಿ ಭರಾಟೆ
ಕಾರವಾರ: ಅಣ್ಣ-ತಂಗಿಯರ ಪವಿತ್ರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬಕ್ಕೆ ಕಡಲನಗರಿ ಸಜ್ಜಾಗಿದೆ. ಹಬ್ಬದ ಮುನ್ನಾದಿನವೇ ನಗರದ ಸವಿತಾ ಸರ್ಕಲ್, ಹೆಂಜಾ ನಾಯ್ಕ ಸರ್ಕಲ್, ಗ್ರೀನ್ ಸ್ಟ್ರೀಟ್, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಕಾಜುಭಾಗ, ಕೋಡಿಭಾಗ, ಗಾಂಧೀಬಜಾರ್ ಹಾಗೂ ಬಸ್ ನಿಲ್ದಾಣ ರಸ್ತೆಯ ಮಾರುಕಟ್ಟೆಗಳಲ್ಲಿ ರಾಖಿ ಖರೀದಿ ಭರಾಟೆ ಜೋರಾಗಿದೆ.
ಛೋಟಾ ಭೀಮ್, ಡೋರೇಮಾನ್, ಸ್ಪೈಡರ್ಮ್ಯಾನ್ನಂತಹ ಕಾರ್ಟೂನ್ ರಾಖಿಗಳು ಹಾಗೂ ಲೈಟಿಂಗ್ ರಾಖಿಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಮುತ್ತು, ಕುಂದನ್, ಬೆಳ್ಳಿ-ಚಿನ್ನದ ಲೇಪಿತ ಫ್ಯಾನ್ಸಿ ರಾಖಿಗಳಿಗೂ ಬೇಡಿಕೆ ಹೆಚ್ಚಿದೆ. ರುದ್ರಾಕ್ಷಿ, ಶ್ರೀಚಂದನ ಹಾಗೂ ರೇಷ್ಮೆದಾರದ ಸಾಂಪ್ರದಾಯಿಕ ರಾಖಿಗಳನ್ನೂ ಗ್ರಾಹಕರು ಆಯ್ಕೆ ಮಾಡುತ್ತಿದ್ದಾರೆ.
ರಾಖಿಯೊಂದಿಗೆ ಸಿಹಿತಿಂಡಿ, ಚಾಕೊಲೇಟ್ ಹಾಗೂ ಡ್ರೈಫ್ರೂಟ್ಸ್ ಖರೀದಿಯೂ ಹೆಚ್ಚಾಗಿದೆ. ₹10ರಿಂದ ನೂರಾರು ರೂಪಾಯಿವರೆಗೆ ರಾಖಿಗಳು ಲಭ್ಯವಿದ್ದು, ವ್ಯಾಪಾರ ಉತ್ತಮವಾಗಿದೆ ಎಂದು ಶಂಕರಿ ಜನರಲ್ ಸ್ಟೋರ್ ಮಾಲೀಕಿ ಶ್ರೀಲಕ್ಷ್ಮೀ ತಿಳಿಸಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯರು ಸಹೋದರರಿಗೆ ರಾಖಿ ಕಟ್ಟಲು ತವರು ಮನೆಯತ್ತ ತೆರಳಲು ಸಿದ್ಧತೆ ನಡೆಸಿದ್ದು, ಬಾಲ್ಯದ ನೆನಪುಗಳು ಹಾಗೂ ಸಹೋದರ-ಸಹೋದರಿಯರ ಬಾಂಧವ್ಯದ ಸಂಭ್ರಮ ನಗರದಲ್ಲಿ ಹಬ್ಬದ ಕಳೆ ಹೆಚ್ಚಿಸಿದೆ.










