ಕಾರವಾರ: ಎದುರಿನಿಂದ ಬಂದ ಸಾಂಟ್ರೋ ಕಾರನ್ನು ತಪ್ಪಿಸಲು ಹೋಗಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟಿಟಿ ವಾಹನ ರಸ್ತೆ ಬದಿಗೆ ಪಲ್ಟಿಯಾದ ಘಟನೆ ಗುರುವಾರ ಮಧ್ಯಾಹ್ನ ತಾಲೂಕಿನ ಹೊಟೆಗಾಳಿ ಸಮೀಪ ನಡೆದಿದೆ.

ಹೈದರಾಬಾದ್ನಿಂದ ಬುಧವಾರ ಪ್ರವಾಸಕ್ಕೆ ಹೊರಟಿದ್ದ 11 ಮಂದಿ ಪ್ರವಾಸಿಗರು ತಿರುಮಲ ಟ್ರಾವೆಲ್ಸ್ನ TS 08 UA 1072 ನೋಂದಣಿ ಸಂಖ್ಯೆಯ ಟಿಟಿ ವಾಹನದಲ್ಲಿ ದಾಂಡೇಲಿಯಿಂದ ಕಾರವಾರ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಹೊಟೆಗಾಳಿ ಸಮೀಪ ಎದುರಿನಿಂದ ಸಾಂಟ್ರೋ ಕಾರೊಂದು ಬಂದಿದ್ದು, ಅದನ್ನು ತಪ್ಪಿಸಲು ಹೋಗಿದಾಗ ಟಿಟಿ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ ಎಂದು ಪ್ರವಾಸಿಗ ವಿಜಯಕುಮಾರ ನಾಗಯ್ಯ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಪಘಾತದಲ್ಲಿ ವಾಹನದಲ್ಲಿದ್ದ 11 ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡವರನ್ನು ಸ್ಥಳೀಯರ ನೆರವಿನಿಂದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









