ಶಿರಸಿ: ಅಪ್ರಾಪ್ತ ವಯಸ್ಸಿನ ಬಾಲಕರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಇಬ್ಬರು ವಾಹನ ಮಾಲಕರಿಗೆ ಶಿರಸಿಯ ಜೆಎಂಎಫ್‌ಸಿ ನ್ಯಾಯಾಲಯ ತಲಾ ₹25 ಸಾವಿರ ದಂಡ ವಿಧಿಸಿದೆ.
ನಗರದ ಹುಬ್ಬಳ್ಳಿ ರಸ್ತೆ ಬಳಿ ಶಿರಸಿ ಸಂಚಾರ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಪ್ರಾಪ್ತ ಬಾಲಕರು ಸ್ಕೂಟರ್ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಪೂರ್ಣಗೊಳಿಸಿದ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರು ವಾಹನ ಮಾಲಕರನ್ನು ತಪ್ಪಿತಸ್ಥರೆಂದು ಘೋಷಿಸಿ ತಲಾ ₹25 ಸಾವಿರ ದಂಡ ವಿಧಿಸಿದೆ. ಅಪ್ರಾಪ್ತರಿಗೆ ವಾಹನ ನೀಡದಂತೆ ಪೋಷಕರು ಹಾಗೂ ವಾಹನ ಮಾಲಕರು ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.









