
ಕಾರವಾರ: ಈದ್ ಮಿಲಾದ್ ಉನ್ನಬಿ ಅಂಗವಾಗಿ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಸೌಹಾರ್ದತೆಯ ಸಂದೇಶ ಸಾರಿದರು.
ಕಾರವಾರ–ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಮಾರ್ಗದರ್ಶನದಲ್ಲಿ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಕಾಂಗ್ರೆಸ್ ಕಾರ್ಯಕರ್ತರು ತಂಪು ಪಾನೀಯ ಹಾಗೂ ಸಿಹಿತಿಂಡಿ ವಿತರಿಸಿ ಶುಭಾಶಯ ಕೋರಿದರು.
ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟ್ಕರ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಈದ್ ಮಿಲಾದ್ ಹಬ್ಬವು ಪ್ರೀತಿ, ಸಹೋದರತ್ವ ಹಾಗೂ ಪರಸ್ಪರ ಗೌರವದ ಸಂದೇಶವನ್ನು ಸಾರುತ್ತದೆ. ಎಲ್ಲ ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಸಾಮರಸ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಯಿತು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.










